ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ರಹಸ್ಯ ವಿಚಾರಗಳು ಬಗೆದಷ್ಟೂ ಬಯಲಾಗುತ್ತಲೇ ಇವೆ. ಪೊಲೀಸ್ ವಿಚಾರಣೆ ವೇಳೆ ಆರೋಪಿಗಳು ಮತ್ತೊಂದು ಗೌಪ್ಯ ವಿಚಾರವನ್ನು ಹೊರಹಾಕಿದ್ದಾರೆ.
ಹೌದು, ‘ಹಲ್ಲೆ ಮಾಡಿದ ಬಳಿಕ ರೇಣುಕಾಸ್ವಾಮಿ ಪಟ್ಟಣಗೆರೆ ಶೆಡ್ ನಲ್ಲೇ ಮೃತಪಟ್ಟಿದ್ದ. ಈ ಬಗ್ಗೆ ತಿಳಿಸಲು ದರ್ಶನ್ ಅವರ ಬೆಂಗಳೂರಿನ ರಾಜರಾಜೇಶ್ವರಿನಗರದ ಮನೆಗೆ ಹೋದೆವು. ‘ನೀವು ಹಲ್ಲೆ ಮಾಡಿದ್ದ ವ್ಯಕ್ತಿ ಸತ್ತು ಹೋಗಿದ್ದಾನೆ’ ಎಂದು ತಿಳಿಸಿದೆವು. ವಿಷಯ ಕೇಳಿದ ಕೂಡಲೇ ನಟ ದರ್ಶನ್ ತಲೆ ಮೇಲೆ ಕೈಹೊತ್ತುಕೊಂಡು ಕುಳಿತರು. ನಂತರ ಅವರು ಮನೆಯಲ್ಲೇ ಉಳಿದುಕೊಂಡರು. ನಾವು ಮತ್ತೆ ಶೆಡ್ ಗೆ ಬಂದು ಶವವನ್ನು ಬಿಸಾಡಿದೆವು’ ಎಂದು ಆರೋಪಿಗಳು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಪವಿತ್ರಾ ಗೌಡ, ದರ್ಶನ್ ಸೇರಿ 17 ಆರೋಪಿಗಳಿದ್ದು, ಎಲ್ಲರಿಗೂ ಜು.18ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳೆಲ್ಲರೂ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಎಲ್ಲರೂ ಸೇರಿ ನನ್ನನ್ನು ಬಲಿಪಶು ಮಾಡಿ ಬಿಟ್ಟಿದ್ದೀರಲ್ಲ ಎಂದು ದರ್ಶನ್ ಕುಪಿತಗೊಂಡಿದ್ದು, ಸಹಚರರೊಂದಿಗೆ ಮಾತನಾಡುತ್ತಿಲ್ಲ ಎನ್ನಲಾಗಿದೆ.