ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟ ದರ್ಶನ್ ಹಾಗೂ ಗೆಳತಿ ಪವಿತ್ರಾ ಗೌಡ ಸೇರಿದಂತೆ ಪ್ರಕರಣದ 17 ಆರೋಪಿಗಳಿಗೂ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಇಂದು ಮತ್ತೆ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಣೆ ಮಾಡಿ ಆದೇಶಿಸಿದೆ.
ಈ ಹಿಂದೆ ವಿಧಿಸಿದ್ದ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ದರ್ಶನ್ ಹಾಗೂ ಡಿ ಗ್ಯಾಂಗ್ ಅನ್ನು ಪೊಲೀಸರು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ನ್ಯಾಯಾಂಗ ಬಂಧನದ ಅವಧಿಯನ್ನು ಎರಡನೇ ಬಾರಿಗೆ ಅಂದರೆ 14 ದಿನಗಳ ಕಾಲ ವಿಸ್ತರಿಸಿದೆ. ಪರಿಣಾಮ ಜು.18ರವರೆಗೆ ಡಿ ಗ್ಯಾಂಗ್ ಮತ್ತೆ ಪರಪ್ಪನ ಅಗ್ರಹಾರ ಜೈಲಿನಲ್ಲೇ ಕೊಳೆಯಬೇಕಾದ ಪರಿಶೀತಿ ಎದುರಾಗಿದೆ.
ಗೆಳತಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ರವಾನಿಸಿದ್ದ ಹಿನ್ನೆಲೆಯಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಅಪಹರಿಸಿದ್ದ ಡಿ ಗ್ಯಾಂಗ್ ಕರೆಂಟ್ ಶಾಕ್ ನೀಡಿ ಹತ್ಯೆ ಮಾಡಿತ್ತು. ಈ ಹಿನ್ನೆಲೆಯಲ್ಲಿ 17 ಆರೋಪಿಗಳನ್ನು ಬಂಧಿಸಲಾಗಿದೆ.