ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪ್ರಯೋಗ ಹಾಗೂ ಅಭಿನಯದ ಮೂಲಕ ಜನಪ್ರಿಯರಾಗಿರುವ ನಟ ಹಾಗೂ ನಿರ್ದೇಶಕ ರಾಜ್ ಬಿ.ಶೆಟ್ಟಿ, ಈಗ ತಮ್ಮ ಹೊಸ ಸಿನೆಮಾವೊಂದರ ಬಿಗ್ ಅಪ್‌ಡೇಟ್ ಕೊಟ್ಟಿದ್ದಾರೆ. ವಿಶೇಷವೆಂದರೆ ರಾಜ್ ಚೊಚ್ಚಲ ನಿರ್ದೇಶನದ ಚಿತ್ರ ʼಒಂದು ಮೊಟ್ಟೆಯ ಕಥೆʼ ಹಾಗೂ ಹಿಟ್ ಚಿತ್ರ ʼಗರುಡ ಗಮನʼ ಚಿತ್ರತಂಡಗಳೇ ಮತ್ತೆ ಈ ಸಿನಿಮಾದಲ್ಲೂ ಒಗ್ಗೂಡಿವೆ.
ನಿನ್ನೆಯಷ್ಟೇ ತಮ್ಮ ಇನ್ಸ್ಟಾಗ್ರಾಂ ಖಾತೆಯ ಲೈವ್‌ನಲ್ಲಿ ಹೊಸ ಸಿನೆಮಾದ ಬಗ್ಗೆ ರಾಜ್ ಸುಳಿವು ಕೊಟ್ಟಿದ್ದರು. ಇಂದು ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಅನ್ನು ತಮ್ಮ ಅಧಿಕೃತ ಇನ್ಸ್‌ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡು ಅಭಿಮಾನಿಗಳಿಗೆ ಸರ್‌ಪ್ರೈಸ್ ನೀಡಿದ್ದಾರೆ.

ವಿಶಿಷ್ಟವಾದ ಟೈಟಲ್‌ನಿಂದಲೇ ಈ ಚಿತ್ರ ಗಮನ ಸೆಳೆಯುತ್ತಿದ್ದು, ಈ ಚಿತ್ರಕ್ಕೆ ʻರೂಪಾಂತರʼ ಎಂದು ಹೆಸರಿಡಲಾಗಿದೆ. ʻಮೆಟಮಾರ್ಫಸಿಸ್ʼ ಅಂದರೆ ರೂಂಪಾತರಕ್ಕೆ ಸಂಬಂಧಿಸಿದ ಥೀಮ್‌ನಲ್ಲಿ ಈ ಆಂಥಾಲಜಿಯ ಐದೂ ಚಿತ್ರಗಳು ವಿಭಿನ್ನವಾಗಿ ಮೂಡಿಬರಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ಕುತೂಹಲ ಕೆರಳಿಸಿರುವ ಟೈಟಲ್ ರಿವೀಲ್ ಪೋಸ್ಟರ್:
ಕೇರಳದವರಾದ ಮಿಥಿಲೇಶ್ ಎಡವಲತ್ತ್ ʻರೂಪಾಂತರʼ ಚಿತ್ರದ ಕತೆ ಬರೆದಿದ್ದು, ಅವರೇ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ರಾಜ್.ಬಿ. ಶೆಟ್ಟಿ ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಮಲಯಾಳಂನಿಂದ ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಸುಹಾನ್ ಪ್ರಸಾದ್, ಪಾರ್ಥ್ ಜಾನಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಶಬರೀಶ್ ಕಬ್ಬಿನಾಲೆ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಜನಪ್ರಿಯ ಸಂಗೀತ ನಿರ್ದೇಶಕ ಮಿಥುನ್ ಮುಕುಂದನ್ ಸಂಗೀತ ಚಿತ್ರಕ್ಕಿದೆ.
ಮಿಥಿಲೇಶ್ ಅವರು ಮೂಲತಃ ಕೇರಳದವರಾಗಿದ್ದರೂ, ಬೆಂಗಳೂರಿನಲ್ಲೇ ತಮ್ಮ ಉನ್ನತ ವಿದ್ಯಾಭ್ಯಾಸವನ್ನು ಮಾಡಿದ್ದಾರೆ. ಒಂದೆರಡು ಮಲಯಾಳಂ ಸಿನೆಮಾಗಳಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿಯೂ ಕೆಲಸ ಮಾಡಿದ್ದಾರೆ. ರೂಪಾಂತರ ಸಿನೆಮಾ ಟೈಟಲ್ ರಿವೀಲ್ ಪೋಸ್ಟರ್‌ನಲ್ಲೇ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ.
ವಿಭಿನ್ನ ಪಾತ್ರದಲ್ಲಿ ರಾಜ್ ಬಿ. ಶೆಟ್ಟಿ:
ಇತ್ತೀಚೆಗಷ್ಟೇ ಮಾಲಿವುಡ್‌ನ ಮೆಗಾಸ್ಟಾರ್ ಮಮ್ಮುಟ್ಟಿ ಜೊತೆ ʻಟರ್ಬೋʼ ಚಿತ್ರದಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಾಜ್ ಶೆಟ್ರು, ಈ ಚಿತ್ರದಲ್ಲೂ ಸ್ಲಂ ಹಿನ್ನಲೆಯಿಂದ ಬಂದ ಗೂಂಡಾ ಪಾತ್ರದಲ್ಲಿ ಮಿಂಚಲಿದ್ದಾರೆ. ‘ಗರುಡ ಗಮನ’ ವೃಷಭ ವಾಹನ ಸಿನಿಮಾದಲ್ಲೂ ಗೂಂಡಾ ಆಗಿ ರಗಡ್ ಲುಕ್‌ನಲ್ಲಿ ರಾಜ್ ಕಾಣಿಸಿಕೊಂಡಿದ್ದರು.
ಹೊಸಬರ ಸಿನಿಮಾ:
ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಬಿಟ್ಟರೆ ಉಳಿದವರೆಲ್ಲಾ ಹೊಸ ಮುಖಗಳು. ಶ್ವೇತಾ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ. ʻಕಥಾ ಸಂಗಮʼ ಆಂಥಾಲಜಿಯ ಜನಮನ್ನಣೆ ಗಳಿಸಿದ ಕಿರುಚಿತ್ರ ʻಉಚ್ಚವ್ವʼದ ನಿರ್ದೇಶಕ ಜೈಶಂಕರ್, ಭರತ್ ಜಿಬಿ, ಮುರುಳೀಧರ ಸಿಕೆ, ಸೋಮಣ್ಣ ಬೋಲೆಗಾಂವ್, ಲೇಖಾ, ಹನುಮಕ್ಕ, ಅಂಜನ್ ಭಾರದ್ವಾಜ್ ಮತ್ತಿತರು ನಟಿಸಿದ್ದಾರೆ.
ಸಿನೆಮಾದ ಚಿತ್ರೀಕರಣ ಹಾಗೂ ತಾಂತ್ರಿಕ ಕಾರ್ಯಗಳು ಮುಗಿದಿದ್ದು, ಶೀಘ್ರದಲ್ಲೇ ರಿಲೀಸ್ ಆಗಲಿದೆ ಎಂದು ಚಿತ್ರತಂಡದ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ. ಪ್ರತಿ ಸಿನಿಮಾದಲ್ಲೂ ರಾಜ್ ಬಿ.ಶೆಟ್ಟಿ ವಿಭಿನ್ನ ಅಭಿನಯದ ಮೂಲಕ ಸಿನಿರಸಿಕರ ಗಮನ ಸೆಳೆಯುತ್ತಿದ್ದು, ರೂಪಾಂತರದಲ್ಲಿ ಶೆಟ್ರ ಅಭಿನಯ ಹೇಗಿರಲಿದೆ ಎನ್ನುವ ಕುತೂಹಲ ಸದ್ಯ ಅಭಿಮಾನಿಗಳಲ್ಲಿದೆ.