ಬೆಳಗಾವಿ: ಸಾಲ ತೀರಿಸಲು ಮಾಡಿದ್ದ ಸಾಲಕ್ಕೆ ಮನೆಯನ್ನೇ ಅಡವಿಟ್ಟಿದ್ದ ಎಂದು ಕುಪಿತಗೊಂಡಿದ್ದ ಮಹಿಳೆಯೊಬ್ಬರು ತನ್ನ ತಾಯಿ ಜತೆ ಸೇರಿ ಪತಿಯ ಕುತ್ತಿಗೆಗೆ ಹಗ್ಗ ಬಿಗಿದು, ಉಸಿರುಗಟ್ಟಿಸಿ ಹತ್ಯೆ ಮಾಡಿದ್ದ ಘಟನೆ ಬೆಳಕಿಗೆ ಬಂದಿದೆ.
ಈ ಘಟನೆಯು ಜಿಲ್ಲೆಯ ಪೀರನವಾಡಿ ಎಂಬಲ್ಲಿ ಕಳೆದ ಜು.೨೯ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೃತನನ್ನು ವಿನಾಯಕ ಜಾಧವ್(೪೮) ಎಂದು ಗುರುತಿಸಲಾಗಿದೆ. ಮೃತನ ಪತ್ನಿ ರೇಣುಕಾ ಹಾಗೂ ಆಕೆಯ ತಾಯಿ ಶೋಭಾ ಕೊಲೆ ಆರೋಪಿಗಳಾಗಿದ್ದಾರೆ.
ಸಾಲಗಾರರ ಕಾಟಕ್ಕೆ ಊರು ಬಿಟ್ಟಿದ್ದ ಮೃತ ವ್ಯಕ್ತಿ ಮೂರು ವರ್ಷಗಳ ಬಳಿಕ ಮನೆಗೆ ಹಿಂದಿರುಗಿದ್ದ. ಮದ್ಯಪಾನ ಮಾಡಿದ್ದ ಕಾರಣ ಬರುತ್ತಿದ್ದಂತೆ ತನ್ನ ಪತ್ನಿ ಜತೆ ವ್ಯಕ್ತಿ ಜಗಳ ತೆಗೆದಿದ್ದ. ಈ ವೇಳೆ ತಾಯಿ, ಮಗಳು ಇಬ್ಬರೂ ಸೇರಿಕೊಂಡು ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ.
ಇನ್ನು ಮೃತನ ಸಹೋದರ ಅರುಣ್ “ನನ್ನ ಅಣ್ಣನ ಸಾವು ಸಹಜ ಸಾವಲ್ಲ, ಕೊಲೆ” ಎಂದು ಆರೋಪಿಸಿ ದೂರು ನೀಡಿದ್ದ. ಈ ಕುರಿತು ತನಿಖೆ ಕೈಗೊಂಡಿದ್ದ ಪೊಲೀಸರ ಎದುರು ಆರೋಪಿಗಳಿಬ್ಬರೂ “ತಾವೇ ಹತ್ಯೆಗೈದು ಮನೆಯ ಹಿಂಭಾಗ ಬಿಸಾಕಿದ್ದೆವು. ಅಲ್ಲದೆ ಅತಿಯಾದ ಮದ್ಯಪಾನ ಮಾಡಿ ಸಾವನ್ನಪ್ಪಿದ್ದಾನೆಂದು ನೆರೆಹೊರೆಯವರಿಗೆ ಹೇಳಿದ್ದೆವು. ಕೊನೆಗೂ ಪೋಸ್ಟ್ ಮಾರ್ಟಮ್ ನಲ್ಲಿ ಕೊಲೆ ಎಂದು ಸಾಬೀತಾದ ಹಿನ್ನೆಲೆ ಸತ್ಯ ಒಪ್ಪಿಕೊಳ್ಳಬೇಕಾಯಿತು” ಎಂದು ತಪ್ಪೊಪ್ಪಿಕೊಂಡಿದ್ದಾರೆ.