ಬೆಂಗಳೂರು: ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದ ಮಹಿಳೆ ಇಂದು ಕೊನೆಯುಸಿರೆಳೆದಿದ್ದಾಳೆ.
ಮೃತಳನ್ನು ಅನುಷಾ ಎಂದು ಹೇಳಲಾಗಿದೆ. ಈಕೆಯನ್ನು ಬೆಂಗಳೂರು ಗ್ರಾಮಾಂತರದ ಹುಳಿಮಾವು ವಲಯದ ಅಕ್ಷಯನಗರದ ನಿವಾಸಿ ಶ್ರೀಹರಿ ಎಂಬುವವರಿಗೆ ಕಳೆದ 5 ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ದಂಪತಿಗೆ ಒಂದು ಮಗು ಕೂಡ ಇದೆ. ಅಕ್ರಮ ಸಂಬಂಧದ ವಿಚಾರವಾಗಿ ಪತಿಯೊಂದಿಗೆ ಜಗಳಕ್ಕಿಳಿದಿದ್ದ ಮೃತೆ, ಶೌಚಾಲಯಕ್ಕೆ ತೆರಳಿ ಅನಾಹುತ ಮಾಡಿಕೊಂಡಿದ್ದಳು.
ಆಕೆಯ ಕಿರುಚಾಟವನ್ನು ಕೇಳಿಸಿಕೊಂಡ ಕುಟುಂಬಸ್ಥರು, ಬಾಗಿಲು ಒಡೆದು ಕೂಡಲೇ ಆಕೆಯನ್ನು ವಿಕ್ಟೊರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಕಳೆದ 2 ದಿನಗಳಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಮಹಿಳೆ, ಚಿಕಿತ್ಸೆ ಫಲಿಸದೆ ಇಂದು ಕೊನೆಗೂ ಉಸಿರು ನಿಲ್ಲಿಸಿದ್ದಾಳೆ.
ಮತ್ತೊಂದೆಡೆ ಅಶ್ಲೀಲ ವಿಡಿಯೋಗಳನ್ನು ತೋರಿಸಿ, ಅದರಲ್ಲಿರುವಂತೆಯೇ ವರ್ತಿಸು ಎಂಬುದಾಗಿಯೂ ಪತಿ ಮೃತಳಿಗೆ ನಿತ್ಯ ಕಿರುಕುಳ ನೀಡುತ್ತಿದ್ದ ಎಂಬ ಆರೋಪವೂ ಕೇಳಿಬಂದಿದೆ. ಈ ಸಂಬಂಧ ಹುಳಿಮಾವು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.