ಕಾಲೇಜಿನ ಒಳಗೆ ಬಿಡದಿದ್ದಕ್ಕೆ ಕುಪಿತಗೊಂಡ ಪಾನಮತ್ತ ವಿದ್ಯಾರ್ಥಿಯೋರ್ವ ಭದ್ರತಾ ಸಿಬ್ಬಂದಿಯೊಬ್ಬರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಅಮೃತಹಳ್ಳಿಯ ಸಿಂಧಿ ಕಾಲೇಜಿನಲ್ಲಿ ನಡೆದಿದೆ.
ಮೃತನನ್ನು ಜೈ ಕಿಶೋರ್ ರಾಯ್ ಎಂದು ಗುರುತಿಸಲಾಗಿದ್ದು, ಭಾರ್ಗವ್ ಹತ್ಯೆ ಮಾಡಿದ ಆರೋಪಿ ವಿದ್ಯಾರ್ಥಿಯಾಗಿದ್ದಾನೆ. ಕೃತ್ಯದ ಬಳಿಕ ತೀವ್ರವಾಗಿ ರಕ್ತಸ್ರಾವ ಆಗಿದ್ದರಿಂದ ಸೆಕ್ಯೂರಿಟಿ ಗಾರ್ಡ್ ಸ್ಥಳದಲ್ಲೇ ಕೊನೆಯುಸಿರೆಳೆದ ಎನ್ನಲಾಗಿದೆ.
ಸ್ಥಳಕ್ಕೆ ಅಮೃತಹಳ್ಳಿ ಪೊಲೀಸರು ಆಗಮಿಸಿ ಪರಿಶೀಲಿಸಿದ್ದು, ಆರೋಪಿ ಯುವಕನನ್ನು ವಶಕ್ಕೆ ಪಡೆದಿದ್ದಾರೆ. ಕಾಲೇಜಿನ ಮುಂಭಾಗ ಮೃತನ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.