ಉಡುಪಿ: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವ ತನ್ನ ಪತ್ನಿಗೆ ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮದ ಕಾರ್ಕಡದಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಅಂಗನವಾಡಿ ಬಳಿಯ ಮನೆಯೊಂದರಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಬೀದರ್ ಮೂಲದ ಜಯಶ್ರೀ(31) ಎಂದು ಗುರುತಿಸಲಾಗಿದೆ. ಕಿರಣ್ ಉಪಾಧ್ಯಾಯ ಗುಂಡ್ಮಿ(44) ಆರೋಪಿ ಪತಿಯಾಗಿದ್ದಾನೆ. ಸದಾ ಮೊಬೈಲ್ ನಲ್ಲೇ ಬ್ಯುಸಿಯಾಗಿರುತ್ತೀಯ ಎಂದು ಜಗಳ ತೆಗೆದಿದ್ದ ಪತಿ, ಕುಪಿತಗೊಂಡು ಪತ್ನಿಯ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದ. ಜಗಳ ವಿಕೋಪಕ್ಕೆ ಹೋಗಿ ಅಕ್ಕ-ಪಕ್ಕದವರಿಗೂ ತಿಳಿದ ಕಾರಣ ಆಕೆಯನ್ನು ಆಸ್ಪತ್ರೆಗೆ ಕಳುಹಿಸಿಕೊಡಲಾಗಿತ್ತು. ಆಗ ಪತಿ ಟೆರಾಸ್ ಮೇಲಿಂದ ಬಿದ್ದಿದ್ದಾಳೆ ಎಂದು ಕಥೆ ಕಟ್ಟಿದ್ದ. ಹೆಚ್ಚಿನ ವಿಚಾರಣೆ ನಡೆಸಲಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಪತ್ನಿಯ ರೀಲ್ಸ್ ನೋಡಿ ಫಿದಾ ಆಗಿದ್ದ ಕಿರಣ್, ಆಕೆಯನ್ನು ಪ್ರೀತಿಸಿ ಮದುವೆಯಾಗಿದ್ದ. ಮೃತಳಿಗೆ ಆರೋಪಿ ಎರಡನೇ ಗಂಡ. ಮೊದಲ ಪತಿಯಿಂದ ವಿಚ್ಛೇದನ ಪಡೆದಿದ್ದಳು. ದಂಪತಿ ಎಂಟು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ಅಲ್ಲದೆ ಆರೋಪಿಯು ಸ್ವಾಮಿ ದೇವಸ್ಥಾನದಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ ಕಾರಣ ಬಾಡಿಗೆ ಮನೆಯಲ್ಲಿ ವಾಸವಿದ್ದರು ಎಂಬ ಮಾಹಿತಿ ಲಭಿಸಿದೆ.