ರಾಯಚೂರು: ಕೌಟುಂಬಿಕ ಕಲಹದಿಂದ ವಿಚಲಿತಗೊಂಡಿದ್ದ ಸರ್ಕಾರಿ ಆಸ್ಪತ್ರೆಯೊಂದರ ಡಿ ಗ್ರೂಪ್ ನೌಕರ ತನ್ನ ಪತ್ನಿ ಮತ್ತು ತಾಯಿ ಇಬ್ಬರನ್ನೂ ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ.
ಈ ಘಟನೆಯು ಜಿಲ್ಲೆಯ ಲಿಂಗಸಗೂರು ತಾಲೂಕಿನ ಮುದ್ಗಲ್ ಪಟ್ಟಣದಲ್ಲಿ ನಡೆದಿದೆ. ಮೃತರನ್ನು ದ್ಯಾವಮ್ಮ ಮತ್ತು ಜ್ಯೋತಿ ಎಂದು ಗುರುತಿಸಲಾಗಿದೆ. ದುರಗಪ್ಪ ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ.
ಮುದ್ಗಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಆರೋಪಿಯ ಕುಟುಂಬವು ಆಸ್ಪತ್ರೆಯ ಕ್ವಾರ್ಟರ್ಸ್ ನಲ್ಲಿ ನೆಲೆಸಿತ್ತು. ಈ ವೇಳೆ ಆರೋಪಿಯು ನಿತ್ಯ ಕುಡಿದು ಬಂದು ತನ್ನ ಪತ್ನಿ, ತಾಯಿ ಜತೆ ಜಗಳವಾಡುತ್ತಿದ್ದ. ನಿನ್ನೆಯೂ ಇದೇ ಪ್ರಸಂಗ ಮುಂದುವರಿಯಲಾಗಿ ಕೃತ್ಯ ಎಸಗಿ ಆರೋಪಿ ಪರಾರಿಯಾಗಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.