ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಅವರನ್ನು ನೋಡಲು ನಿತ್ಯ ನೂರಾರು ಅವರ ಅಭಿಮಾನಿಗಳು ಜೈಲಿನತ್ತ ಬರುತ್ತಿದ್ದಾರೆ.
ಅದರಂತೆ ಜಾಲಹಳ್ಳಿ ನಿವಾಸಿ ಸೌಮ್ಯಾ ಎಂಬ ವಿಶೇಷಚೇತನ ಅಭಿಮಾನಿ ಆಗಮಿಸಿ, ನನ್ನ ಅಣ್ಣನಂತಿರುವ ದರ್ಶನ್ ಅವರನ್ನು ನೋಡಲೇಬೇಕೆಂದು ಹಠ ಹಿಡಿದ ಸನ್ನಿವೇಶ ಜೈಲಿನ ಎದುರು ಕಂಡುಬಂತು.
ಇನ್ನು ದರ್ಶನ್ ಕೊಲೆ ಮಾಡಿಲ್ಲ, ಅವರು ಈಗಲೂ ಆರೋಪಿ ಆಗಿದ್ದಾರಷ್ಟೇ. ದರ್ಶನ್ ಅಣ್ಣ ಜೈಲು ಸೇರಿದ್ದಾಗಿನಿಂದಲೂ ಊಟ, ನೀರು ಬಿಟ್ಟಿದ್ದೇನೆ. ನನಗೆ ಏನೇ ಆದರೂ ಪರವಾಗಿಲ್ಲ. ನನ್ನ ಅಣ್ಣನನ್ನು ನೋಡಬೇಕು. ಅಧಿಕಾರಿಗಳು ಅನುಮತಿ ನೀಡದಿದ್ದರೆ ಇಲ್ಲೇ ಕುಳಿತು ಕೊಳ್ಳುತ್ತೇನೆ. ಯಾರಿಗೂ ಗೊತ್ತಾಗದೇ ಸಹಾಯ ಮಾಡುವ ಗುಣ ನಮ್ಮ ಅಣ್ಣನಿಗಿದೆ. ನಮ್ಮ ಕುಟುಂಬ ನಿರ್ವಹಣೆಗೆ ಆಟೋ ಸಹ ಕೊಡಿಸಿದ್ದಾರೆ. ಈ ವಿಚಾರ ನಾವು ಈಗ ಹೇಳುತ್ತಿದ್ದೇವೆ ಎಂದ ಅವರು, ದಯಮಾಡಿ ದರ್ಶನ್ ನೋಡಲು ಅವಕಾಶ ಮಾಡಿಕೊಡಿ ಎಂದು ಅಂಗಲಾಚಿದ್ದಾರೆ.