ಮಂಗಳೂರು: ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಯುವತಿ ಕೊನೆಗೂ ಉಸಿರು ಚೆಲ್ಲಿದ್ದಾಳೆ. ಈ ಘಟನೆಯು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮ ಸಮೀಪದ ಕಲ್ಲಾಜೆ ಎಂಬಲ್ಲಿ ನಡೆದಿದೆ.
ಮೃತಳನ್ನು ವೆಂಕಟೇಶ್ ಎಂಬುವವರ ಪುತ್ರಿ ಅನಿತಾ() ಎಂದು ಹೇಳಲಾಗಿದ್ದು, ವಾಣಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ಪ್ರಥಮ ಪಿಯು ವಿದ್ಯಾರ್ಥಿನಿ ಎನ್ನಲಾಗಿದೆ. ‘ನನಗೆ ಹತ್ತನೇ ತರಗತಿಯಲ್ಲಿ ಕಡಿಮೆ ಅಂಕ ಬಂದಿದೆ. ಹಾಗಾಗಿ ಮನೆಯವರಿಗೆ ಕ್ಷತ ಕೊಡಲು ನನಗೆ ಇಷ್ಟವಿಲ್ಲ’ ಎಂದು ವಿದ್ಯಾರ್ಥಿನಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಳು.
ನಾಲ್ಕು ದಿನಗಳ ಹಿಂದೆಯೇ ಇಲಿ ಪಾಷಾಣವನ್ನು ಸೇವಿಸಿದ್ದ ಯುವತಿ, ತೀವ್ರವಾಗಿ ಅಸ್ವಸ್ಥಗೊಂಡಿದ್ದಳು. ಕೂಡಲೇ ಆಕೆಯನ್ನು ಮಂಗಳೂರಿಗೆ ಸ್ಥಳಾಂತರಿಸಿ ಹೆಚ್ಚಿನ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವತಿ ಉಸಿರು ಚೆಲ್ಲಿದ್ದಾಳೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.