ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಎರಡನೇ ಆರೋಪಿಯಾಗಿರುವ ನಟ ದರ್ಶನ್, ಕಳೆದ ಒಂದು ತಿಂಗಳಿನಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.
ಜೈಲಿನಲ್ಲಿರುವ ಅವರನ್ನು ತಾಯಿ ಮೀನಾ, ಸಹೋದರ ದಿನಕರ ತೂಗುದೀಪ, ನಟ ವಿನೋದ್ ಪ್ರಭಾಕರ್, ನಿರ್ದೇಶಕ ಪ್ರೇಮ್, ನಟಿ ರಕ್ಷಿತಾ, ಪವಿತ್ರಾಗೌಡ ಸ್ನೇಹಿತೆ ಸಮತಾ ಗೌಡ, ನಟ ಧನ್ವೀರ್ ಸೇರಿದಂತೆ ಹಲವರು ಜೈಲಿಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿಕೊಂಡು ತೆರಳುತ್ತಿದ್ದಾರೆ.
ಈ ನಡುವೆ ಇಂದು ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ತಮ್ಮ ಪುತ್ರ ವಿನೀಶ್ ಜತೆ ಜೈಲಿಗೆ ಆಗಮಿಸಿ ದರ್ಶನ್ ಯೋಗಕ್ಷೇಮ ವಿಚಾರಿಸಿದ್ದಾರೆ. ಈ ವೇಳೆ ಪುತ್ರ ತಂದೆಯ ಸ್ಥಿತಿಯನ್ನು ನೋಡಿ ಕಣ್ಣೀರಿಟ್ಟಿದ್ದಾನೆ. ಇದನ್ನು ಕಂಡ ದರ್ಶನ್ ಕೂಡ ಗದ್ಗದಿತರಾಗಿದ್ದಾರೆ. ಈ ವೇಳೆ ಮಗನನ್ನು ವಿಜಯಲಕ್ಷ್ಮಿ ಸಂತೈಸಿದರು ಎನ್ನಲಾಗಿದೆ.
ಇನ್ನು ದರ್ಶನ್ ಪತ್ನಿಯ ಜತೆ ಜಾಮೀನು ಪಡೆಯುವ ಸಂಬಂಧ ಚರ್ಚಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.