ಬೆಂಗಳೂರು: ನಿನ್ನೆ ಬೆಂಗಳೂರು ವಿವಿ ಆವರಣದಲ್ಲಿನ ಪಾಳುಬಿದ್ದ ಬಾವಿಯಲ್ಲಿ ಸಿಕ್ಕಿದ್ದ ಮಡಿವಾಳ ಠಾಣೆಯ ಪೇದೆ ಶಿವಾರಾಜ್ ಅವರ ಸಾವಿನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.
ನಗರದಲ್ಲಿ ೨೫೦ಕ್ಕೂ ಹೆಚ್ಚು ಸಿಸಿಟಿವಿಗಳನ್ನು ಪರಿಶೀಲಿಸಿದ್ದ ಪೊಲೀಸರು, ಕೊನೆಗೂ ಶಿವರಾಜ್ ಮೃತದೇಹವನ್ನು ಪತ್ತೆಹಚ್ಚಿದ್ದರು. ಈ ವೇಳೆ ಇದು ಕೊಲೆಯಾಗಿರಬಹುದೆಂದು ತನಿಖಾಧಿಕಾರಿಗಳು ಊಹಿಸಿದ್ದರು. ಆದರೆ ಮೃತದೇಹ ಮೇಲೆತ್ತಲಾಗಿ ಸೊಂಟಕ್ಕೆ ಕಲ್ಲು ಕಟ್ಟಿಕೊಂಡಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಇದು ಕೊಲೆಯಲ್ಲ, ಆತ್ಮಹತ್ಯೆ ಎಂಬ ತೀರ್ಮಾನಕ್ಕೆ ಪೊಲೀಸರು ಬಂದಿದ್ದಾರೆ. ಆದರೆ ಶಿವರಾಜ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಹೆಚ್ಚಿನ ಮಾಹಿತಿ ಲಭಿಸಬೇಕಿದೆ.
ಇನ್ನು ಶಿವರಾಜ್ ಸಹೋದರ ಗಿರೀಶ್ ವಾಣಿ ಎಂಬಾಕೆಯನ್ನು ಮದುವೆಯಾಗಿದ್ದ. ಆದರೆ ಕೌಟುಂಬಿಕ ಕಲಹ ಪರಿಣಾಮ ವಾಣಿ ಶಿವರಾಜ್ ಗೆ ನಿತ್ಯ ದೂರವಾಣಿ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಳು. ಇದರಿಂದ ಬೇಸತ್ತು ಶಿವರಾಜ್ ಆತ್ಮಹತ್ಯೆ ಮಾಡಿಕೊಡಿದ್ದಾನೆ ಎಂದು ಹೇಳಲಾಗುತ್ತಿದೆ.