ಕಲಬುರಗಿ: ರಾಜ್ಯದ ಬಹುದೊಡ್ಡ ಸಮುದಾಯ ವೀರ ಶೈವ ಲಿಂಗಾಯತರು ಮತ ಹಾಕಿದ್ದರಿಂದಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಹಾಗಾಗಿ ಸಿಎಂ ಬದಲಾವಣೆಯ ಕೂಗು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಬದಲಿಸುವುದಾದರೆ ಆ ಸ್ಥಾನವನ್ನು ನಮ್ಮ ಸಮುದಾಯದ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರಿಗೆ ಕೊಡಿ ಎಂದು ಬಾಳೆಹೊನ್ನೂರುಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಒತ್ತಾಯಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿ, ಶಾಮನೂರು, ಎಂ.ಬಿ.ಪಾಟೀಲ್ ಹಾಗೂ ಈಶ್ವರ್ ಖಂಡ್ರೆ ನಮ್ಮ ಸಮುದಾಯದ ಪ್ರಮುಖ ನಾಯಕರಾಗಿದ್ದಾರೆ. ಇವರಲ್ಲಿ ಯಾರಿಗೇ ಸಿಎಂ ಸ್ಥಾನ ನೀಡಿದರೂ ರಾಜ್ಯದಲ್ಲಿ ಮತ್ತಷ್ಟು ಅಭಿವೃದ್ಧಿಯಾಗಲಿದೆ. ಈ ಹಿಂದೆ ವೀರೇಂದ್ರ ಪಾಟೀಲ್ ಅವರಿಗೆ ಬಿಟ್ಟರೆ ನಮ್ಮ ಸಮುದಾಯದ ಯಾರಿಗೂ ಕಾಂಗ್ರೆಸ್ ಈವರೆಗೆ ಸಿಎಂ ಸ್ಥಾನ ನೀಡಿಲ್ಲ ಎಂದಿದ್ದಾರೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ನೀಡಲೆಂದು ಒಕ್ಕಲಿಗ ಸಮುದಾಯದ ಚಂದ್ರಶೇಖರನಾಥ ಸ್ವಾಮೀಜಿ ಅವರು ಹೇಳಿಕೆ ನೀಡಿದ ಬೆನ್ನಲ್ಲೇ ಶ್ರೀಗಳು ಈ ಹೇಳಿಕೆ ನೀಡಿದ್ದಾರೆ. ಆದರೆ ಸ್ವಾಮೀಜಿಗಳ ಹೇಳಿಕೆಗೆ ತಲೆಕೆಡಿಸಿಕೊಳ್ಳಬೇಕಾದ ಅವಶ್ಯಕತೆ ಇಲ್ಲವೆಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಇಬ್ಬರೂ ಹೇಳಿದ್ದು, ಚರ್ಚೆಗೆ ಪೂರ್ಣ ವಿರಾಮ ಇಟ್ಟಿದ್ದಾರೆ.