ಉಡುಪಿ: ಪತಿಯೊಂದಿಗೆ ಬಸ್ ಹತ್ತಲು ಬೈಕ್ ನಲ್ಲಿ ತೆರಳುತ್ತಿದ್ದ ನವ ವಿವಾಹಿತೆ ಅಪಘಾತದಲ್ಲಿ ಗಾಯಗೊಂಡು ಕೊನೆಯುಸಿರೆಳೆದಿರುವ ಘಟನೆ ಉಡುಪಿಯ ಈದು ಗ್ರಾಮದ ಹೊಸ್ಮಾರು ಸೇತುವೆ ಬಳಿ ನಡೆದಿದೆ.
ಮೃತಳನ್ನು ಕಾರ್ಕಳದ ತೆಳ್ಳಾರು ನಿವಾಸಿ ನೀಕ್ಷಾ ಎಂದು ಗುರುತಿಸಲಾಗಿದೆ. ಪತ್ನಿಯನ್ನು ಮಂಗಳೂರಿಗೆ ಕಳುಹಿಸಲು ಪತಿ ವಿಶಾಲ್ ಅವರು ಪತ್ನಿ ನೀಕ್ಷಾರನ್ನು ಬೈಕಿನಲ್ಲಿ ಕರೆದೊಯ್ಯುತ್ತಿದ್ದರು. ಈ ವೇಳೆ ಬೈಕ್ ಗೆ ನಾಯಿಯೊಂದು ದಿಢೀರನೆ ಅಡ್ಡ ಬಂದಿದೆ. ನಾಯಿಯನ್ನು ತಪ್ಪಿಸಲು ಯತ್ನಿಸಿ ಪತಿ ನಿಯಂತ್ರಣ ಕಳೆದುಕೊಂಡಿದ್ದಾರೆ. ಪರಿಣಾಮ ಬೈಕ್ ಸ್ಕಿಡ್ ಆಗಿದ್ದು, ಇಬ್ಬರೂ ಕೆಳಗೆ ಬಿದ್ದಿದ್ದಾರೆ.
ಆಗ ನೀಕ್ಷಾ ತಲೆಗೆ ಗಂಭೀರ ಪೆಟ್ಟಾಗಿದ್ದು, ತೀವ್ರ ರಕ್ತ ಸ್ರಾವವಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ. ಇನ್ನು ಪತಿ ವಿಶಾಲ್ ಸಣ್ಣಪುಟ್ಟ ಗಾಯಗಳೊಂದಿಗೆ ಬದುಕುಳಿದಿದ್ದಾರೆ. ಈ ಸಂಬಂಧ ಕಾರ್ಕಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.