ಹಾವೇರಿ: ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ಇಂದು ಬೆಳ್ಳಂಬೆಳಗ್ಗೆ ಜವರಾಯನು ಅಟ್ಟಹಾಸ ಮೆರೆದಿದ್ದು, ನಿಂತಿದ್ದ ಲಾರಿಗೆ ಟಿಟಿ (ಟೆಂಪೋ ಟ್ರಾವೆಲ್ಲರ್) ಡಿಕ್ಕಿ ಹೊಡೆದ ಪರಿಣಾಮ ಒಂದೇ ಗ್ರಾಮದ ಮೂರು ಕುಟುಂಬಕ್ಕೆ ಸೇರಿದ 13 ಮಂದಿ ಕೊನೆಯುಸಿರೆಳೆದಿದ್ದಾರೆ.
ಮೃತರನ್ನು ಪರಶುರಾಮ್ (45), ಭಾಗ್ಯ (40), ನಾಗೇಶ್ (50), ವಿಶಾಲಾಕ್ಷಿ (50), ಸುಭದ್ರಾ ಭಾಯಿ (65), ಪುಣ್ಯ (50), ಮಂಜುಳಾ ಭಾಯಿ (57), ಚಾಲಕ ಆದರ್ಶ್ (23), ಮಾನಸಾ (24), ರೂಪಾ (40), ಮಂಜುಳಾ (50), ಆರ್ಯ (4) ಮತ್ತು ನಂದನ್ (6) ಎಂದು ಗುರುತಿಸಲಾಗಿದೆ.
ಟೆಂಪೋದಲ್ಲಿ ಒಟ್ಟು 17 ಜನ ಪ್ರಯಾಣಿಸುತ್ತಿದ್ದರು. ಈ ಪೈಕಿ 11 ಜನ ಸ್ಥಳದಲ್ಲೇ ಮೃತಪಟ್ಟರೆ, ಇಬ್ಬರು ಆಸ್ಪತ್ರೆ ಸಾಗಿಸುವಾಗ ಮೃತಪಟ್ಟಿದ್ದಾರೆ. ಮೃತರೆಲ್ಲರೂ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆ ಹೊನ್ನೂರು ಬಳಿಯ ಎಮ್ಮಿಗಟ್ಟಿ ಗ್ರಾಮದವರು ಎಂಬ ಮಾಹಿತಿ ಲಭಿಸಿದೆ.
ಘಟನೆಯಲ್ಲಿ ಓರ್ವ ಅಜ್ಜಿ ಮತ್ತು ಓರ್ವ ಯುವತಿ ಸೇರಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಅಲ್ಲದೆ ಮೃತರ ಆತ್ಮಗಳಿಗೆ ಚಿರಶಾಂತಿ ದೊರಕಲಿ ಹಾಗೂ ಕುಟುಂಬಸ್ಥರಿಗೆ ನೋವು ಭರಿಸುವ ಶಕ್ತಿಯನ್ನು ಭಗವಂತ ನೀಡಲೆಂದು ಸಂತಾಪ ಸೂಚಿಸಿದ್ದಾರೆ. ಸವದತ್ತಿ ಯಲ್ಲಮ್ಮನ ದರ್ಶನ ಮುಗಿಸಿಕೊಂಡು ಹಿಂದಿರುಗುವಾಗ ನಿಂತಿರುವ ಲಾರಿಗೆ ಟಿಟಿ ವಾಹನ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿತು.