ಬೆಂಗಳೂರು: ಲೋಕಸಭಾ ವಿಪಕ್ಷ ನಾಯಕನಾಗಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದರೊಂದಿಗೆ 2014ರಿಂದ 2024ರವರೆಗೆ ಖಾಲಿ ಇದ್ದ ಸ್ಥಾನ ಕೊನೆಗೂ ಭರ್ತಿ ಆದಂತಾಗಿದೆ.
ಈ ಕುರಿತು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಬಿಜೆಪಿಯ ಗೆಲುವಿನ ನಾಗಾಲೋಟವನ್ನು ತಡೆಹಿಡಿಯಲೆಂದೇ ರಾಹುಲ್ ಅವರನ್ನು ವಿಪಕ್ಷ ನಾಯಕರನ್ನಾಗಿ ಮಾಡಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿ, ನಾನೂ ಕೂಡ ಇದನ್ನೇ ಬಯಸಿದ್ದೆ. ಪಕ್ಷದ ಕಾರ್ಯಕಾರಿ ಸಮಿತಿಯ ಸಭೆ ವೇಳೆ ರಾಹುಲ್ ಅವರನ್ನೇ ನೇರವಾಗಿ ವಿಪಕ್ಷ ನಾಯಕರಾಗುವಂತೆ ಒತ್ತಾಯಿಸಿದ್ದೆ. ಕೊನೆಗೂ ಅಂದುಕೊಂಡ ಸ್ಥಾನದಲ್ಲಿ ಕುಳಿತಿರುವ ಅವರಿಗೆ ಹೃದಯಪೂರ್ವಕವಾಗಿ ಅಭಿನಂದನೆ ತಿಳಿಸುತ್ತೇನೆ ಎಂದಿದ್ದಾರೆ.
ಇನ್ನು ಈ ಬಾರಿ ಎರಡು ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದ ರಾಹುಲ್, ರಾಯ್ ಬರೇಲಿಯನ್ನು ಉಳಿಸಿಕೊಂಡು ವಯನಾಡು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಗೊತ್ತೇ ಇದೆ.