ಹಾಸನ: ತಾಲೂಕಿನ ಹೊಸಕೊಪ್ಪಲು ಗ್ರಾಮದ ಪ್ರೀತಿ(35) ಎಂಬ ವಿವಾಹಿತ ಮಹಿಳೆಯು ಕಳೆದ ಎರಡು ದಿನಗಳ ಹಿಂದೆ ಮಂಡ್ಯದಲ್ಲಿ ಹತ್ಯೆಯಾಗಿದ್ದಳು. ಆರಂಭದಲ್ಲಿ ಈಕೆ ಕಾರಿನಲ್ಲಿಯೇ ಲೈಂಗಿಕ ಕ್ರಿಯೆ ನಡೆಸೋಣ ಎಂದು ಒತ್ತಾಯಿಸಿದ್ದಕ್ಕೆ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಕರೋಟಿ ಗ್ರಾಮದ ಪುನೀತ್ ಕಪಾಳಕ್ಕೆ ಹೊಡೆದು, ಮೂರ್ಛೆ ಹೋದ ಬಳಿಕ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದ ಎನ್ನಲಾಗುತ್ತಿತ್ತು. ಆದರೆ ಈ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಈ ಕುರಿತು ಮೃತ ಮಹಿಳೆಯ ಸಹೋದರಿ ಪ್ರತಿಕ್ರಿಯೆ ನೀಡಿದ್ದು, ನನ್ನ ಅಕ್ಕನನ್ನು ಆಕೆಯ ಸ್ನೇಹಿತೆಯೇ ಕೊಲೆ ಮಾಡಿಸಿದ್ದಾಳೆಂದು ನೇರವಾಗಿ ಆರೋಪಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿ, ನನ್ನ ಅಕ್ಕನಿಗೆ ಮೈಸೂರಿನ ಸುಮಿತ್ರಾ ಎಂಬಾಕೆ ಪರಿಚಯವಿದ್ದಳು. ಆಕೆಯೂ ಹಾಸನದದಲ್ಲೇ ಬಾಡಿಗೆ ಮನೆ ಮಾಡಿಕೊಂಡಿದ್ದಳು. ಪರಿಚಯವಿದ್ದಿದ್ದರಿಂದ ಇಬ್ಬರೂ ಒಂದೇ ಕಡೆ ಉದ್ಯೋಗ ಮಾಡುತ್ತಿದ್ದರು. ಈ ನಡುವೆ ನನ್ನ ಅಕ್ಕನಿಂದ ಆಕೆ ಮೂರು ಲಕ್ಷ ರೂ. ಹಣ ಪಡೆದಿದ್ದಳು. ಅದನ್ನು ಸದಾ ಕೊಡುವಂತೆ ಕೇಳುತ್ತಿದ್ದುದಕ್ಕೆ ಆಕೆ, ‘ಎಲ್ಲರೂ ಇರುವಾಗ ಕೇಳಬೇಡ’ ಎಂದಿದ್ದಳು. ಅಲ್ಲದೆ ‘ಮನೆಯಲ್ಲಿ ಮಗನ ಹುಟ್ಟುಹಬ್ಬವಿದೆ ಬಾ’ ಎಂದು ಅಕ್ಕನನ್ನು ಕರೆದಿದ್ದಳು. ಹಾಗಾಗಿ ಆಕೆಯೇ ಆರೋಪಿಯನ್ನು ಕಾರಿನಲ್ಲಿ ಕಳುಹಿಸಿ ಕರೆಸಿಕೊಂಡಿದ್ದಾಳೆ. ಬಳಿಕ ‘ಆಕೆಯ ಮೈಮೇಲೆ ಸಾಕಷ್ಟು ಒಡವೆಗಳಿದ್ದು, ಅವುಗಳನ್ನು ಕಿತ್ತುಕೊಂಡು ಕೊಲೆ ಮಾಡು, ಆಕೆಯನ್ನು ಜೀವಂತವಾಗಿ ಕಳುಹಿಸಬೇಡ’ ಎಂದು ಆರೋಪಿಗೆ ಆಕೆಯೇ ಹೇಳಿಕೊಟ್ಟಿದ್ದಾಳೆ ಎಂದು ಆರೋಪಿಸಿದ್ದಾಳೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಯನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಮೃತಳಿಗೆ ನಾಲ್ಕು ಮತ್ತು ಒಂಭತ್ತು ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ.