ಬೆಂಗಳೂರು: ವಾಹನದ Fastag ಬಳಸಿ ಇನ್ನು ಮುಂದೆ ಹೆದ್ದಾರಿ ಟೋಲ್ ಶುಲ್ಕದ ಜೊತೆಗೆ ಟ್ರಾಫಿಕ್ ಚಲನ್, ಪಾರ್ಕಿಂಗ್ ಶುಲ್ಕ, ವಿಮಾ ಕಂತು ಹಾಗೂ ವಿದ್ಯುತ್ ವಾಹನ(EV)ಗಳ ಚಾರ್ಜಿಂಗ್ ಶುಲ್ಕವನ್ನೂ ಪಾವತಿ ಮಾಡಬಹುದು.
ಹೌದು, ಬ್ಯಾಂಕ್‌ಗಳು ಇದುವರೆಗೆ ಸುಮಾರು 11 ಕೋಟಿ Fastagಗಳನ್ನು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವು ಇದರ ಬಳಕೆಯನ್ನು ಬಹುಮುಖ ಪಾವತಿ ಸಾಧನವಾಗಿ ವಿಸ್ತರಿಸಲು ಯೋಚನೆ ರೂಪಿಸುತ್ತಿದೆ ಎಂಬ ಮಾಹಿತಿ ಲಭಿಸಿದೆ..
ಈ ಕುರಿತ ಮುಂದಿನ ಹಂತದ ಚಟುವಟಿಕೆಗಳನ್ನು ಸ್ಥಿರಗೊಳಿಸಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(NHAI), ಹಣಕಾಸು ಸಚಿವಾಲಯದ ಮೇಲಾಧಿಕಾರಿಗಳು ಫಿನ್ಟೆಕ್ ಕಂಪನಿಯೊಂದಿಗೆ ಈಗಾಗಲೇ ಚಿಂತನಾ ಸಭೆ ನಡೆಸಿವೆ.
ಈ ಕುರಿತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಮಾತನಾಡಿ, “ಫಿನ್ಟೆಕ್ ಸಂಸ್ಥೆ ಮತ್ತು ಇತರೆ ಪಾಲುದಾರರ ಸಹಕಾರದಿಂದ Fastag ಬಳಕೆಯನ್ನು ವ್ಯಾಪಕವಾಗಿಸಲು ಉದ್ದೇಶಿಸಲಾಗಿದೆ. ಇದನ್ನು ಬಳಕೆದಾರರ ಅನುಕೂಲತೆಗೆ ತಕ್ಕಂತೆ ಹೊಂದಿಸುವುದು, ಸಾರಿಗೆ ಮತ್ತು ಪ್ರಯಾಣ ಸೇವೆಗಳನ್ನು ಸರಳಗೊಳಿಸುವ ಉದ್ದೇಶ ಹೊಂದಿದ್ದೇವೆ” ಎಂದಿದ್ದಾರೆ.
ರಸ್ತೆ ಸಾರಿಗೆ ಕಾರ್ಯದರ್ಶಿ ವಿ.ಉಮಾಶಂಕರ್ ಮಾತನಾಡಿ, “ಫಾಸ್ಟ್ಯಾಗ್ ಈಗಾಗಲೇ ಮನುಷ್ಯರಿಲ್ಲದ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಸ್ಥಾಪಿಸಿದೆ ಹಾಗೂ ಹಲವು ಅಡೆತಡೆಗಳನ್ನು ನಿವಾರಿಸಿದೆ. ಆದರೆ ಇದನ್ನು ಇನ್ನು ಹೆಚ್ಚಿನ ವಾಹನ ಸಂಬಂಧಿತ ಸೇವೆಗಳಿಗೆ ಉಪಯೋಗಿಸಬಹುದಾಗಿದೆ. ಉದಾಹರಣೆಗೆ ಇಂಧನ ಪಾವತಿ, ವಿಮಾ ಕಂತು ಹಾಗೂ ಟ್ರಾಫಿಕ್ ಚಲನ್ ಪಾವತಿ ಸೇರಿದಂತೆ ಹಲವು ಉದ್ದೇಶಗಳಿಗೆ ಬಳಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಈಗಾಗಲೇ ‘ಒಂದು ವಾಹನ, ಒಂದು ಟ್ಯಾಗ್’ ನಿಯಮವನ್ನು ಜಾರಿ ಮಾಡಿದೆ” ಎಂದಿದ್ದಾರೆ.
ಇನ್ನು ಮುಂದಿನ ಮೂರು ವರ್ಷಗಳಲ್ಲಿ ವಾಹನಗಳ ವಿಮೆ ಪ್ರಮಾಣವನ್ನು 50%ರಿಂದ 75% ವರೆಗೆ ಏರಿಸಲು, ವಿಮಾ ಕಂಪನಿಗಳು Fastagಗಳನ್ನು ನೀಡಲು ಅವಕಾಶ ನೀಡಬಹುದೇ ಎಂದು ಪ್ರತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, “ಅದೂ ಸಾಧ್ಯವಿದೆ. ಆದರೆ ಅದಕ್ಕೂ ಮೊದಲು ವಾಹನಗಳ ಅಂಕಿ-ಅಂಶಗಳನ್ನು ಶುದ್ಧೀಕರಿಸುವ ಅಗತ್ಯವಿದೆ. ಪ್ರಸ್ತುತ ಇರುವ ಅಂಕಿ-ಅಂಶಗಳ ಪ್ರಕಾರ, 7.5 ಕೋಟಿ ವಾಹನಗಳು ನಿಷ್ಕ್ರಿಯವಾಗಿವೆ ಎಂಬ ಮಾಹಿತಿ ಇದೆ” ಎಂದು ಉಮಾಶಂಕರ್ ತಿಳಿಸಿದ್ದಾರೆ.