ಮೊದಲನೇ ಆಂಗ್ಲೋ-ಮೈಸೂರು ಯುದ್ಧ(1766-1769):
ಬ್ರಿಟೀಷರು ಹೈದರಾಬಾದಿನ ನಿಜಾಮನ ಸಹಾಯದೊಂದಿಗೆ 1766ರಲ್ಲಿ ಹೈದರಾಲಿ ವಿರುದ್ಧ ಯುದ್ಧ ಸಾರಿದರು. ಆದರೆ ಯುದ್ಧಕ್ಕೆ ಮುನ್ನವೇ ಹೈದರಾಲಿ & ನಿಜಾಮ ರಹಸ್ಯ ಒಪ್ಪಂದ ಮಾಡಿಕೊಂಡರು. ಬ್ರಿಟೀಷ್ ಸೇನೆಯು ಹೈದರಾಲಿ ಸೇನೆಯನ್ನು ಚೆಂಗಮ್ & ತಿರುವಣ್ಣಾಮಲೈನಲ್ಲಿ ಹಿಮ್ಮೆಟ್ಟಿಸಿತು. ಹೈದರಾಲಿ ಸೇನೆಯು ಮದ್ರಾಸ್ ವರೆಗೆ ಆಕ್ರಮಣ ಮಾಡಿದ ಪರಿಣಾಮ ಬ್ರಿಟೀಷರು ಮತ್ತು ಹೈದರಾಲಿ ನಡುವೆ ಗೆದ್ದ ಸ್ಥಳಗಳನ್ನು ವಾಪಸ್ ನೀಡುವ ಬಗ್ಗೆ ಒಪ್ಪಂದವಾಯಿತು. ಇದನ್ನೇ ‘ಮದ್ರಾಸ್ ಒಪ್ಪಂದ’ ಎನ್ನಲಾಗುತ್ತದೆ.
ಎರಡನೇ ಆಂಗ್ಲೋ-ಮೈಸೂರು ಯುದ್ಧ(1780-1784):
ಮರಾಠರ ವಿರುದ್ಧದ ಯುದ್ಧ ವೇಳೆ ಬ್ರಿಟೀಷರ ವಿಶ್ವಾಸಘಾತುಕತೆ ಕಂಡಿದ್ದ ಹೈದರ್ ಅಲಿ, ಬ್ರಿಟೀಷರ ವೈರಿಗಳಾದ ಫ್ರೆಂಚರಿಗೆ ಸಹಾಯ ನೀಡಿದ. ಇದರಿಂದ ಬ್ರಿಟೀಷರು ಕೆಂಡಾಮಂಡಲರಾದರು. ಮರಾಠರು ಕಿತ್ತುಕೊಂಡಿದ್ದ ಭೂಭಾಗಗಳನ್ನು ಪಡೆದ ಹೈದರ್, ಕಾಂಚೀವರಂನ್ನೂ ಕೂಡ ವಶಕ್ಕೆ ಪಡೆದ. ಬ್ರಿಟೀಷ್ ಸೇನಾಧಿಪತಿ ಹೆಕ್ಟೇರ್ ಮನ್ರೋ ಕಳುಹಿಸಿದ್ದ ಸೇನೆಯನ್ನೂ ಮಣಿಸಿದ. 1782ರಲ್ಲಿ ಹೈದರಾಲಿ ಕ್ಯಾನ್ಸರ್ ನಿಂದ ಮರಣ ಹೊಂದಿದ ಪರಿಣಾಮ 1784ರಲ್ಲಿ ಮಂಗಳೂರು ಒಪ್ಪಂದವಾಯಿತು. ಇದರೊಂದಿಗೆ ಯುದ್ಧ ಕೊನೆಗೊಂಡಿತು.
ಮೂರನೇ ಆಂಗ್ಲೋ-ಮೈಸೂರು ಯುದ್ಧ(1789-1792):
1789ರಲ್ಲಿ ಮೈಸೂರಿನ ದೊರೆ ಟಿಪ್ಪು ಸುಲ್ತಾನ್ ಬ್ರಿಟೀಷರ ಅಧೀನದಲ್ಲಿದ್ದ ತಿರುವಾಂಕೂರಿನ ಮೇಲೆ ದಾಳಿ ನಡೆಸಿದ. ಈ ಯುದ್ಧದಲ್ಲಿ ಟಿಪ್ಪುಗೆ ಫ್ರೆಂಚರು ಬೆಂಬಲ ನೀಡಲಿಲ್ಲ. ಪರಿಣಾಮ ಟಿಪ್ಪು ರಾಕೆಟ್ ಬಳಸಿ ದಾಳಿ ನಡೆಸಿದ. ಆದರೂ ಯುದ್ಧದಲ್ಲಿ ಸೋತು ಮೈಸೂರಿನ ಕೆಲ ಭಾಗಗಳನ್ನು ಹೈದರಾಬಾದಿನ ನಿಜಾಮ, ಮರಾಠರು, ಮದ್ರಾಸ್ ಪ್ರೆಸಿಡೆನ್ಸಿ & ಬ್ರಿಟೀಷರ ಅಡಿಯಾಳುಗಳಿಗೆ ಅರ್ಧ ರಾಜ್ಯ ಬಿಟ್ಟುಕೊಟ್ಟು, ಮಕ್ಕಳನ್ನೂ ಒತ್ತೆ ಇಟ್ಟ. ಕೊನೆಗೆ ಶ್ರೀರಂಗಪಟ್ಟಣ ಒಪ್ಪಂದದೊಂದಿಗೆ ಯುದ್ಧ ಅಂತ್ಯಗೊಂಡಿತು.
ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧ(1798-1799):
ಟಿಪ್ಪುವಿನ ಸೇನಾಧಿಕಾರಿ ಮೀರ್ ಸಾದಕ್ ಈ ಯುದ್ಧದಲ್ಲಿ ಬ್ರಿಟೀಷರೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದ. ಪರಿಣಾಮ ಯುದ್ಧ ನಡೆಯುತ್ತಿರುವಾಗ ತನ್ನ ತುಕಡಿಯನ್ನು ಸಂಬಳ ತೆಗೆದುಕೊಳ್ಳಲು ಕಳುಹಿಸಿ, ಮಾಳಿಗೆಯಲ್ಲಿ ಶೇಖರಿಸಿಡಲಾಗಿದ್ದ ಮದ್ದುಗುಂಡುಗಳ ಮೇಲೆ ನೀರು ಸುರಿದ. ಪರಿಣಾಮ ಬ್ರಿಟೀಷ್ ಸೇನೆಯು ಸುಲಭವಾಗಿ ಒಳ ನುಗ್ಗಿ ಮೈಸೂರಿನ ಕೋಟೆಯ ಒಂದು ಭಾಗವನ್ನು ಭಗ್ನಗೊಳಿಸಿದ್ದವು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಟಿಪ್ಪು, ಬ್ರಿಟೀಷ್ ಸೇನೆಯ ಗುಂಡಿಗೆ ಬಲಿಯಾದ. ಟಿಪ್ಪು ಪುತ್ರ ಫತೇ ಅಲಿಯನ್ನು ಗಡಿಪಾರು ಮಾಡಲಾಯಿತು. ಬಳಿಕ ಬ್ರಿಟೀಷರ ಅಧೀನ ಭಾಗವಾದ ಮೈಸೂರು ಸಂಸ್ಥಾನವು ಮರಳಿ ಮೈಸೂರು ರಾಜವಂಶಸ್ಥರ ಪಾಲಾಯಿತು.