ಬೆಂಗಳೂರು: ಪತಿಯೊಂದಿಗೆ ಮುನಿಸಿಕೊಂಡು ಪ್ರತ್ಯೇಕವಾಗಿ ವಾಸಿಸುತ್ತಿದ್ದ ನೇಪಾಳ ಮೂಲದ ಮಹಾಲಕ್ಷ್ಮಿ ಎಂಬ ಮಹಿಳೆಯ ಹತ್ಯೆ ಪ್ರಕರಣಕ್ಕೆ ತೆರೆ ಬಿದ್ದಿದೆ.
ವಿವಾಹಿತಳನ್ನು ಮೂವತ್ತು ಪೀಸ್ ಮಾಡಿ ಹತ್ಯೆ ಮಾಡಿದ್ದ ಹಿನ್ನೆಲೆಯಲ್ಲಿ ಪ್ರಕರಣವನ್ನು ಭೇದಿಸಲು ಪೊಲೀಸರು ನಾಲ್ಕು ತನಿಖಾ ತಂಡಗಳನ್ನು ರಚಿಸಿದ್ದರು. ತನಿಖೆ ಚುರುಕಾಗಿ ಸಾಗಿದ್ದು, ಆರೋಪಿ ಪಶ್ಚಿಮ ಬಂಗಾಳದಲ್ಲಿದ್ದಾನೆ ಎಂಬ ಮಾಹಿತಿಯನ್ನೂ ಕೂಡ ನೀಡಿದ್ದರು. ಈ ನಡುವೆ ಹತ್ಯೆ ಮಾಡಿದ ಆರೋಪಿ ಮುಕ್ತಿ ರಂಜನ್ ರಾಯ್ ಎಂಬುದೂ ತಿಳಿದುಬಂದಿತ್ತು. ಆದರೆ ಆರೋಪಿ ಕೂಡ ಒಡಿಶಾದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಮಾಹಿತಿ ಸದ್ಯ ಲಭಿಸಿದೆ.
ನೇಪಾಳ ಮೂಲದ ಮಹಿಳೆ ಪತಿಯೊಂದಿಗೆ ಬೆಂಗಳೂರಿಗೆ ಬಂದು ನೆಲಮಂಗಲದಲ್ಲಿ ನೆಲೆಸಿದ್ದರು. ಆದರೆ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಒಂದು ತಿಂಗಳ ಹಿಂದೆ ಪರಿಚಯಸ್ಥನೊಂದಿಗೆ ಸಹ-ಜೀವನ ನಡೆಸುತ್ತಿದ್ದರು. ಈ ನಡುವೆ ಆರೋಪಿ ಕೃತ್ಯ ಎಸಗಿ ಪರಾರಿಯಾಗಿದ್ದ.