ಬೆಂಗಳೂರು: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಪೂರ್ವ ನಿಗದಿಯಂತೆ ಮಂಡ್ಯದಲ್ಲಿಯೇ ಡಿಸೆಂಬರ್ 20, 21, 22ರಂದು ಮೂರು ದಿನಗಳ ಕಾಲ ನಡೆಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯನ್ನು ನಡೆಸಿದರು. ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಮಂಡ್ಯ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ಭಾಗವಹಿಸಿದ್ದರು.
ಸಭೆ ಬಳಿಕ ಮಾತನಾಡಿದ ಸಿಎಂ, ಸರ್ಕಾರವು ಜಿಲ್ಲಾಡಳಿತ, ಸಾಹಿತ್ಯ ಪರಿಷತ್ತಿಗೆ ಎಲ್ಲಾ ಅಗತ್ಯ ಸಹಕಾರ ನೀಡಲಿದೆ. ಸಮ್ಮೇಳನದ ಅಧ್ಯಕ್ಷರ ಆಯ್ಕೆಯಾದ ಕೂಡಲೇ ಮಾಹಿತಿ ನೀಡುತ್ತೇವೆ. ಜಿಲ್ಲಾಡಳಿತ, ಸಾಹಿತ್ಯ ಪರಿಷತ್ತು ಅರ್ಹ ಸಾಹಿತಿಗಳ ಪಟ್ಟಿ ಒದಗಿಸಿದ ನಂತರ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.
ಇನ್ನು ಮಂಡ್ಯದಲ್ಲಿ 1974ರಲ್ಲಿ ಜಯದೇವಿ ತಾಯಿ ಲಿಗಾಡೆ ಅಧ್ಯಕ್ಷತೆಯಲ್ಲಿ 48ನೇ, 1994ರಲ್ಲಿ ಡಾ.ಚದುರಂಗ ಅವರ ಅಧ್ಯಕ್ಷತೆಯಲ್ಲಿ 63ನೇ ಸಾಹಿತ್ಯ ಸಮ್ಮೇಳನ ನಡೆದಿದ್ದವು. ಇದೀಗ ಮೂರನೇ ಬಾರಿಗೆ ಸಮ್ಮೇಳನ ಆಯೋಜಿಸಲಾಗುತ್ತಿದೆ.